ಎದೆಯ ಬಿಳಿಯ ಹಾಳೆ ಮೇಲೆ
ಒಲವು ಎಂಬ ಶಾಹಿಯಲ್ಲಿ
ಬರೆಯಿತೇಕೆ ಪ್ರೇಮಕವನ
ನಿನ್ನ ಕಣ್ಣ ಲೇಖನಿ ?
ತಿರುಗಿ ನೋಡಿ ಮುಂದೆ ನಡೆದು
ಮುಂಗುರುಳ ಸರಿಸಿ ಸನ್ನೆ ಮಾಡಿ
ಏನೋ ನೆಪದಿ ಮತ್ತೆ ನಿಂತು
ಸುಳಿದೆಯೇಕೆ ಬಳಿಯಲಿ ?
ಕದ್ದು ಕದ್ದು ನನ್ನ ನೋಡಿ
ಒಮ್ಮೆ ನಕ್ಕು ಮಾತನಾಡಿ
ಮತ್ತೆ ನಾಚಿ ನೆಲವ ನೋಡಿ
ಬರೆದೆಯೇಕೆ ಬೆರಳಲಿ ?
ಸುತ್ತ-ಮುತ್ತ ಎಲ್ಲ ಮರೆತೆ
ಒಂಟಿಯಾಗಿ ಎಲ್ಲೋ ಕುಳಿತೆ
ನೀನೇ ದೃಶ್ಯ , ನಿನದೇ ಮಾತು
ಹೋದೆ ಎಲ್ಲಿಗೆ ಹೇಳದೆ ???